ಮಂಗರಸ 1

	ಸುಮಾರು 1350. ಜೈನಕವಿ. ಖಗೇಂದ್ರ ಮಣಿದರ್ಪಣ ಎಂಬ ವೈದ್ಯಗ್ರಂಥದ ಕರ್ತೃ. ಕಾಲದ ದೃಷ್ಟಿಯಿಂದ ಈತ ಪ್ರಾಚೀನನಾದುದರಿಂದ ಈತನನ್ನು ಒಂದನೆಯ ಮಂಗರಸ ಎಂದು ಕರೆಯಲಾಗಿದೆ. ಮಂಗ, ಮಂಖಣ, ಮಂಗಣ ಎಂಬ ಹೆಸರುಗಳೂ ಈತನಿಗೆ ರೂಢಿಯಲ್ಲಿದ್ದುವೆಂದು ಈತನ ಗ್ರಂಥದಿಂದ ತಿಳಿದುಬರುತ್ತದೆ. ಹೊಯ್ಸಳ ರಾಜ್ಯದ ದೇವಳಿಗೆ ನಾಡಿನ ಮುಗಳಿಪುರದ ಅರಸನಾದ ಮಂಗವಿಭು ಮತ್ತು ಅರಸಿ ಪೆರ್ಮಲೆ ಇವರ ಮಗ. ಅಲ್ಲಲ್ಲೆ ಪಾಶ್ರ್ವನಾಥ ತೀರ್ಥಂಕರ ಮತ್ತು ಧರಣೇಂದ್ರಯಕ್ಷ, ಪದ್ಮಾವತಿ ಯಕ್ಷಿಯನ್ನು ವಿಷಪರಿಹಾರ ಮಂತ್ರಗಳಲ್ಲಿ ಹೇಳಿದ್ದಾನೆ. ತನ್ನನ್ನು ಜಗಜ್ಜನಮಹಿತಾ, ವರಹಿತಚರಿತಂ, ಜಿನಪಾದಶೇಖರ, ಅಪಗತಕುಮಾತಾ, ಸರಸ್ವತೀ ಮುಖತಿಲಕ ಸ್ಮರರಿಪುಜಿನೇಂದ್ರಚರಣ ಸ್ಮರಣಾಂತಃಕರಣಶುದ್ಧ, ಶ್ರೀ ಪಂಚಗುರು ಪದಾಂಬುಜಭೃಂಗ ಎಂದು ಕರೆದುಕೊಂಡಿದ್ದಾನೆ. ಈತನ ಗ್ರಂಥದಲ್ಲಿ ಕಂಡು ಬರುವ ಅಹಿಮದಗರುಡ, ಸಾಹಿತ್ಯವೈದ್ಯವಿದ್ಯಾಂಬುನಿಧಿ, ಭಿಷಗ್ವರತಿಲಕ ಮೊದಲಾದ ಹೆಸರುಗಳು ಈತನ ವೈದ್ಯವಿe್ಞÁನಕ್ಕೆ ಸಾಕ್ಷಿಯಾಗಿರುವಂತೆಯೇ ಸುಲಲಿತವಿದಿಕವಂಸತ, ಕವಿಜನೈಲಮಿತ್ರ, ಅಖಿಲವಿದ್ಯಾಜಲನಿಧಿ, ಕವಿಪದ್ಮ ಭಾಸ್ಕರ, ಬುಧಮಿತ್ರ ವಿದಗ್ವಾಭರಣ, ವಿದಗ್ಧಚೂಡಾರತ್ನ, ಮೊದಲಾದ ಬಿರುದುಗಳು ಹಾಗೂ ಸಂಬೋಧನೆಗಳು ಈತ ಕವಿಯೂ ಆಗಿದ್ದನೆಂಬುದನ್ನು ತೋರಿಸುತ್ತವೆ. 
(ಎಚ್.ಎಸ್.ಸಿ.)

	ಈತ ವಿಜಯನಗರದ ರಾಜ 1ನೆಯ ಹರಿಹರನ (1336-56) ಕಾಲದಲ್ಲಿದ್ದಂತೆ ತಿಳಿಯುತ್ತದೆ. ಪೂರ್ವಕವಿಗಳಲ್ಲಿ ಕೇಶವವರ್ಣಿಯನ್ನು (ಸುಮಾರು 1359) ಸ್ಮರಿಸಿದ್ದಾನೆ.

	ಖಗೇಂದ್ರಮಣಿದರ್ಪಣ ವಿಷವೈದ್ಯಗ್ರಂಥ. ಕಂದವೃತ್ತಗಳಲ್ಲಿ ರಚಿತವಾಗಿದೆ. ಇದರಲ್ಲಿ ಸ್ಥಾವರ, ಜಂಗಮ, ಕೃತಕ ಎಂಬ ಮೂರು ವಿಷವರ್ಗಗಳಲ್ಲಿ ಅಡಕವಾಗಿರುವ ನಾನಾಬಗೆಯ ವಿಷಗಳ ಲಕ್ಷಣಗಳನ್ನು ಮಂತ್ರ ತಂತ್ರ ಔಷಧ ಪ್ರಯೋಗಗಳಿಂದ ಮಾಡುವ ವಿಷಾಪಹಾರ ವಿಧಾನಗಳನ್ನು ಹದಿನಾರು ಅಧಿಕಾರಗಳಲ್ಲಿ ವಿವರಿಸಿದೆ. ಮಧ್ಯೆ ಮಧ್ಯೆ ಗದ್ಯರೂಪದ ವಿವರಣೆಗಳಿವೆ. ಸ್ಥಾವರ ವಿಷಕ್ರಿಯೆಯ ಭಾಗವನ್ನು ತಾನು ಪೂಜ್ಯಪಾದನ ವೈದ್ಯಗ್ರಂಥದಿಂದ ಸಂಗ್ರಹಿಸಿರುವಂತೆ ಹೇಳಿಕೊಂಡಿದ್ದಾನೆ. ಕೆಲವು ಕಡೆ ಕಾಶ್ಯಪ ಸಂಹಿತೆ ಅಥವಾ ಗರುಡ ಪಂಚಾಕ್ಷರೀಕಲ್ಪ ಎಂಬ ಗ್ರಂಥಕ್ಕೂ ಇದಕ್ಕೂ ಹೋಲಿಕೆ ಕಂಡುಬರುತ್ತದೆ.

	ಖಗೇಂದ್ರಮಣಿ ದರ್ಪಣ ಶಾಸ್ತ್ರಗ್ರಂಥವಾದರೂ ಪದ್ಯಗಳು ಲಲಿತವಾಗಿದ್ದು ಮಂಗರಸ ಒಳ್ಳೆಯ ಕವಿ ಎಂಬುದಕ್ಕೆ ಸಾಕ್ಷಿಯಾಗಿದೆ. ಕನ್ನಡದ ಪ್ರಥಮ ಸ್ವತಂತ್ರ ವಿಷವೈದ್ಯಗ್ರಂಥವೆಂಬ ಖ್ಯಾತಿ ಇದಕ್ಕಿದೆ.		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ